ದುಲೀಪ್ ಸಿಂಗ್
 1837 - 1893. ಪಂಜಾಬಿನ ರಣಜಿತ್ ಸಿಂಗನ ಕಿರಿಯ ಮಗ. ಇವನು ಕೇವಲ ಆರು ವರ್ಷದ ಬಾಲಕನಾಗಿದ್ದಾಗ ತಂದೆಯ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ. ಇವನ ತಾಯಿ ರಾಣಿ ಜಿಂದಾನ್ ಸ್ವಲ್ಪ ಕಾಲ ರಾಜಪ್ರತಿನಿಧಿಯಾಗಿದ್ದಳು. ಬ್ರಿಟಿಷ್ ಸರ್ಕಾರ ಇವನನ್ನು ರಾಜನೆಂದು ಒಪ್ಪಿಕೊಂಡಿತು. ಆ ಕಾಲದಲ್ಲಿ ಮಂತ್ರಿಗಳು ಪ್ರಬಲರಾಗಿ ದುರಾಡಳಿತದಲ್ಲಿ ನಿರತರಾದರು. ಇದರಿಂದಾಗಿ ಕೆಲವು ಸಚಿವರು ರಾಜಕೀಯ ಕೊಲೆಗೆ ಒಳಗಾದರು.  ದುಲೀಪ್ ಸಿಂಗನ ತಾಯಿ ರಾಣಿ ಜಿಂದಾನಳೇ ಈ ಕೊಲೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು.

ಪಂಜಾಬನ್ನು ವಶಪಡಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿದ ಬ್ರಿಟಿಷರಿಗೆ ಸಿಖ್ಖರ ರಾಜ್ಯದ ಈ ಗೊಂದಲ ಪರಿಸ್ಥಿತಿ ಅನುಕೂಲಕರವಾಗಿ ಪರಿಣಮಿಸಿತು. ಭಾರತದ ಗವರ್ನರ್-ಜನರಲ್ ಲಾರ್ಡ್ ಹಾರ್ಡಿಂಜ್ 1845 ರಲ್ಲಿ ಪಂಜಾಬನ್ನು ಗೆಲ್ಲುವ ಯೋಚನೆ ಮಾಡಿದ. ಒಂದನೆಯ ಸಿಖ್ ಯುದ್ಧದಲ್ಲಿ (1845 - 46) ಸಿಖ್ಖರು ಸೋತರು. ಅವರು ತಮ್ಮ ರಾಜ್ಯದ ಒಂದು ಭಾಗವನ್ನು ಬ್ರಿಟಿಷರಿಗೆ ಒಪ್ಪಿಸಬೇಕಾಯಿತಲ್ಲದೆ ಅಗಾಧ ದಂಡವನ್ನೂ ತೆರಬೇಕಾಯಿತು.

ಲಾರ್ಡ್ ಹಾರ್ಡಿಂಜನ ಅನಂತರ ಗವರ್ನರ್-ಜನರಲ್ ಆಗಿ ಬಂದ ಲಾರ್ಡ್ ಡಾಲ್‍ಹೌಸಿ ಸಿಖ್ಖರ ಅಧಿಕಾರವನ್ನು ಕೊನೆಗಾಣಿಸಿ ಪಂಜಾಬನ್ನು ವಶಪಡಿಸಿಕೊಳ್ಳಬೇಕೆಂಬ ಸಂಚು ಹೂಡಿದ. ಮುಲ್ತಾನಿನಲ್ಲಿ ನಡೆದ ಒಂದು ಗಲಭೆ ಡಾಲ್‍ಹೌಸಿಗೆ ಅವಕಾಶ ಕಲ್ಪಿಸಿಕೊಟ್ಟಿತು. ಮುಲ್ತಾನಿನಲ್ಲಿ ಇಬ್ಬರು ಇಂಗ್ಲಿಷ್ ಅಧಿಕಾರಿಗಳು ಕೊಲೆಯಾದರು. ಎರಡನೆಯ ಸಿಖ್ ಯುದ್ಧ 1948 ರಲ್ಲಿ ಆರಂಭವಾಯಿತು. ಈ ಯುದ್ಧದಲ್ಲಿ ಸಿಖ್ಖರು ಅಪಾರ ನಷ್ಟ ಅನುಭವಿಸಿದರು. 1849 ರ ಮಾರ್ಚ್ 14ರಂದು ಸುಮಾರು 18,000 ಸಿಖ್ ಸೈನಿಕರು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತರಾದರು. ಮಹಾರಾಜ ದುಲೀಪ್ ಸಿಂಗನ ಪ್ರದೇಶಗಳೆಲ್ಲ ಬ್ರಿಟಿಷ್ ಸಾಮ್ರಾಜ್ಯದ ಭಾಗಗಳೆಂದು ಡಾಲ್‍ಹೌಸಿ ಘೋಷಿಸಿದ.

ದುಲೀಪ್ ಸಿಂಗನಿಗೆ ವಿಶ್ರಾಂತಿ ವೇತನವನ್ನು ಕೊಟ್ಟು ಇಂಗ್ಲೆಂಡಿಗೆ ಕಳುಹಿಸಲಾಯಿತು. ಅಲ್ಲಿ ಇವನು ಕ್ರೈಸ್ತನಾಗಿ ಮತಾಂತರಗೊಂಡ. ಅಲ್ಲದೆ ನಾರ್ಫೊಕ್‍ನಲ್ಲಿ ಒಬ್ಬ ದೊಡ್ಡ ಜಮೀನ್ದಾರನಾದ. ದುಲೀಪ್ ಸಿಂಗ್ ವಿಕ್ಟೋರಿಯ ರಾಣಿಯ ಪ್ರೀತಿ ವಿಶ್ವಾಸಕ್ಕೂ ಪಾತ್ರನಾದ. ಇವನು ಈಜಿಪ್ಷಿಯನ್ ಕ್ರೈಸ್ತ ಸ್ತ್ರೀಯೊಬ್ಬಳನ್ನು ವಿವಾಹವಾದ. ಅವರಿಗೆ ಒಂದು ಸಂತಾನ ಆಯಿತು.

ದುಲೀಪ್ ಸಿಂಗ್ ಅನೇಕ ವರ್ಷಗಳ ಕಾಲ ವೈಭವದ ಜೀವನ ನಡೆಸಿದ. ಇದರಿಂದ ಇವನ ಸಾಲದ ಹೊರೆ ಏರಿತು. ಇವನ ಸ್ವಭಾವದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡುಬಂತು. ಇವನು ಮೊದಲು ಬ್ರಿಟಿಷ್ ಸರ್ಕಾರಕ್ಕೂ ಅನಂತರ ಪ್ರಿವಿ ಕೌನ್ಸಿಲ್ಲಿಗೂ ಮನವಿ ಮಾಡಿಕೊಂಡು ತನ್ನ ರಾಜ್ಯವನ್ನು ಪುನಃ ಪಡೆದುಕೊಳ್ಳಲು ಯತ್ನಿಸಿದ. ಇವನ ಪ್ರಯತ್ನ ವಿಫಲವಾಯಿತು. ತನ್ನ ರಾಜ್ಯವನ್ನು ಪಡೆದುಕೊಳ್ಳಲು ಯೂರೋಪಿನ ರಾಜ್ಯಗಳ ಸಹಾಯ ಯಾಚಿಸಿದ. ರಷ್ಯಕ್ಕೆ ಭೇಟಿ ನೀಡಿ (1887), ಜಾóರ್ ದೊರೆ ಭಾರತದ ಮೇಲೆ ದಂಡೆತ್ತಿ ಹೋಗಬೇಕೆಂದು ಪ್ರಚೋದಿಸಲು ಯತ್ನಿಸಿ ವಿಫಲನಾದ. ಭಾರತದ ಅನೇಕ ರಾಜರುಗಳೊಂದಿಗೂ ಸಿಖ್ ಸರದಾರರೊಂದಿಗೂ ಪತ್ರವ್ಯವಹಾರ ನಡೆಸಿದ. ತಾನು ಕ್ರೈಸ್ತ ಮತವನ್ನು ತ್ಯಜಿಸಿ ಪುನಃ ಸಿಖ್ ಧರ್ಮಕ್ಕೆ ಸೇರಿರುವುದಾಗಿ ಪ್ರಕಟಿಸಿದ ತನ್ನ ಬಗ್ಗೆ ಯಾರಿಗೂ ಆಸಕ್ತಿಯಿಲ್ಲವೆಂದು ತಿಳಿಯುವವರೆಗೂ ಇವನು ತನ್ನ ಪ್ರಯತ್ನ ಮುಂದುವರಿಸಿದ. ರಾಣಿಯ ಕ್ಷಮಾಪಣೆ ಕೇಳಿಕೊಳ್ಳುವಂತೆ ಕೆಲವರು ಇವನಿಗೆ ಬುದ್ಧಿವಾದ ಹೇಳಿದರು. ರಾಣಿಯಲ್ಲಿ ಇವನು ಕ್ಷಮಾಪಣೆ ಕೇಳಿಕೊಳ್ಳಲು ಅವಳು ಇವನನ್ನು ಕ್ಷಮಿಸಿದಳು. 1890 ರಲ್ಲಿ ಇವನ ಸಾಲವನ್ನೆಲ್ಲ ತೀರಿಸಲಾಯಿತು. ದುಲೀಪ್ ಸಿಂಗ್ 1893 ರ ಅಕ್ಟೋಬರ್ 22 ರಂದು ಪ್ಯಾರಿಸಿನಲ್ಲಿ ಕಾಲವಾದ. ಇವನನ್ನು ಇಂಗ್ಲೆಂಡಿನಲ್ಲಿ ಸಮಾಧಿ ಮಾಡಲಾಯಿತು.					(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ